ಜನವರಿ 26, 2021 : ಈ ಭಾರತ ದೇಶ ಸಂವಿಧಾನ ಬದ್ಧ ಗಣತಂತ್ರ ವ್ಯವಸ್ಥೆಯಲ್ಲಿ ವಿಶ್ವಕ್ಕೆ ಒಂದು ಮಾದರಿ ದೇಶವಾಗಿದೆ ಎಂಬುದಾಗಿ ಅಸಂಷನ್ ಚರ್ಚ್ ನ ಹಿರಿಯ ಧರ್ಮಗುರುಗಳೂ ಹಾಗೂ ಅಸಂಷನ್ ಶಾಲೆಗಳ ವ್ಯವಸ್ಥಾಪಕರು ಆದ ಫಾದರ್ ಫ್ರಾಂಕ್ಲಿನ್ ಡಿಸೋಜರವರು ಹೇಳಿದರು. ನಗರದ ಅಸಂಷನ್ ಚರ್ಚ್ ಆವರಣದಲ್ಲಿ ಅಸಂಷನ್ ವಿದ್ಯಾಸಂಸ್ಥೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಈ ದೇಶದ ಸಮಗ್ರ ಆಡಳಿತ ವ್ಯವಸ್ಥೆಗೆ ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಒಂದು ಶ್ರೇಷ್ಠ ಸಂವಿಧಾನವನ್ನು ರಚಿಸಿಕೊಂಡು ಅದನ್ನು ಜಾರಿಗೊಳಿಸಿದ ಸುದಿನವನ್ನು ಇಂದು ದೇಶಾದ್ಯಂತ ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂಬುದಾಗಿ ಅವರು ಹೇಳಿದರು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆಲೂರು ಹನುಮಂತರಾಯಪ್ಪರವರು ಈ ಸಾಲಿನ ಎಸ್.ಎಸ್.ಎಲ್.ಸಿ ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಕನಸುಗಳಿರಬೇಕು, ತಮ್ಮ ಕನಸಿನ ಮೂಲಕ ಬದುಕಿನ ಗುರಿಯನ್ನು ತಲುಪಬೇಕು, ಈ ಮೂಲಕ ಓದಿದ ಶಾಲೆಗೆ ಹೆತ್ತ ತಂದೆತಾಯಿಗಳಿಗೆ ಕೀರ್ತಿ ತರಬೇಕು ಎಂಬುದಾಗಿ ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ನಾಗೇಂದ್ರ ನಾಯ್ಕ ಮಾತನಾಡಿ, ನಾನು ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ನನ್ನ ಬದುಕನ್ನು ರೂಪಿಸುವಲ್ಲಿ ಈ ಅಸಂಷನ್ ಶಿಕ್ಷಣ ಸಂಸ್ಥೆಯ ಪಾತ್ರ ಬಹಳ ಮಹತ್ವದ್ದು, ಆದ್ದರಿಂದ ಈ ಶಾಲೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಸಂಷನ್ ಚರ್ಚ್ ನ ಕಿರಿಯ ಧರ್ಮ ಗುರುಗಳೂ ಹಾಗೂ ಅಸಂಷನ್ ಆಂಗ್ಲ ಮಾದ್ಯಮ ಪ್ರೌಡ ಶಾಲೆ ಯ ಮುಖ್ಯೋಪಾಧ್ಯಾಯ ರೂ ಆದ ಫಾದರ್ ನೆಲ್ಸನ್ ಡಿಸೋಜ ಹಾಗೂ ಅಸಂಷನ್ ಶಾಲೆಯ ಕನ್ನಡ ವಿಭಾಗದ ಮುಖ್ಯಶಿಕ್ಷಕಿ ಸಿಸ್ಟರ್ ಆಲ್ವಿನ್, ಇಂಗ್ಲೀಷ್ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಸುಕ್ರೀನಾ ಇತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಹಿರಿಯ ಶಿಕ್ಷಕರಾದ ದಯಾನಂದಪ್ಪನವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕ ಪ್ರಭಾಕರ್ ವಂದನಾರ್ಪಣೆ ನೆರವೇರಿಸಿದರು.